Sunday 17 March 2024

ದನಗಾಹಿ


ದನಗಾಹಿ

ಜಿಡ್ಡುಗಟ್ಟಿದ ಅಂಗಿ
ಬೆವರು ಮೈಯ್ಯ ಕಮಟು
ತಲೆತುಂಬ ಸುತ್ತಿದ
ರಕ್ಷಣೆಗೆಂದೆ ಮುಂಡಾಸು
ಹರಿದದ್ದ ಮರೆಮಾಚಿ
ಗಂಟಿಕ್ಕಿ ಉಟ್ಟ ಬಿಳಿಕಚ್ಚೆ
ಹಿಮ್ಮಡ ಸವೆದ ಕಿತ್ತ ಉಂಗುಷ್ಠದ ಚಪ್ಪಲಿ
ಕೈಯಲ್ಲಿ ಹಿಡಿದೊಂದು
ಡೊಂಕು ಧನಕೋಲು
      ನಿತ್ಯದಿವು ರೂಪರೇಖು ಜೊತೆಗೆ ತನ್ನ ಕರಿನೆರಳು

ಸರಗುಣಿಕೆ ಬಿಚ್ಚಿ ಬಿಟ್ಟು ಅಟ್ಟಿದ
ಹಸುವಿನ ಕೊರಳ ಅಗ್ಗ
ದನಪಾಲನೆಂಬುದಕೆ ಸಾಕ್ಷಿಗೆ
ಹಿಂಡ ಮೇಯಿಸಲು
ಅಡದಿ ಹೊಲದ ಮೇವಿನ ಲೆಕ್ಕ ಕೇಳತ
ಕರೆಕಲ್ಲ ತನಕ  ಬಿದ್ದ ಸಗಣಿಯ
ಎತ್ತಿ ತಂದು ಹಿತ್ತಲಲ್ಲಿ
ಕೋಳಿ ಕೆದರುತ್ತಿದ್ದ ತಿಪ್ಪಗಾಕಿ
ಮತ್ತೊಮ್ಮೆ  ಅಡಿಕೆ ಎಲೆ ಹೊಗೆ ಸೊಪ್ಪ
ಅಜ್ಜಿಗಂಟಲಿ ಮೆದ್ದು
ಹಾಲ ಕರುಗೆ ಹುಲ್ಲಿಡೆಂದು ಹೇಳಿ
            ಹೊಂಟ ಪರಿಯಲಿತ್ತು ಕಾಳಜಿ
ಮಮತೆ,ರಕ್ಷಣೆ,ಜ್ವಾಪಾನ

ಐನೋರ ಅಂಗಡಿಗಾಕಿ
ಹಲ್ಲುಜೋಳ ಅಡಿಕೆಲೆ ಅಜ್ಜನ ತಂಭಾಕ
ತಂದು ಸವರ್ಧ ಅಜ್ಜಿಗಿಟ್ಟು
ಸೋಮಾರ ಸ್ನಾನಕೆ ಅಂಗಿ
ಕೈ ಹೊಲಿಗೆ ಹಾಕಿಡೆನುತ
ಕಲ್ಲು ವಲದ ಕಳೆ ಅರವತ್ತುವ ತೊಗರಿ
ಯರಿ ಬೆಳೆ ಅಂಗಲ
ಊರಗೌಡ್ರು ಎಷ್ಟುಸಲ
ಹೇಳಿ ಕಳುಹಿದರು ನಿಲ್ಲಿಸದೆ ಇಳಿವಯದಲ್ಲೂ
ಎತ್ತಿನ ಹುಲ್ಲು ತಾನ ಹೊತ್ತು
ಪಡಸಾಲೆ ಹೆಣ ಮಲಗಿದ
ಮಗನ ಬೈದು ಜತೆಗಾರರು
ದನನಿಲ್ಲುತಿಲ್ಲ ಎಂದು ಕರೆಯೇ
          ಕೋಲ ಊರುತ ಬದುಕ ದಾರಿಯ ಹಿಂದಿಕ್ಕುವ
ಕಾಯಕದ ಜೀವ ಸಾಗತಿತ್ತ

ಯಾರ ಅಂಗು ತನಗಿಲ್ಲದೆ
ಪ್ರೀತಿ ಗೌರವ ಸ್ವಾಭಿಮಾನ ಮನೆಬಾಳ್ವೆ
ಧನಗಾಹಿಗೆ ಇದ್ದದ್ದು
ಆಸಿಗೆಯಷ್ಟು ಕಾಲಚಾಚಿ ಹೊದ್ದದ್ದು
ಊರ ಉಸಬರಿ ಇನಿತಿಲ್ಲ
ತಮ್ಮನಾಗಿ ಕಾಸ ಮಲ್ಲಜ್ಜ
ಕಷ್ಟಹಂಚಿಕೊಳ್ಳಲು
ಪತ್ನಿ ಹನುಮಜ್ಜಿ ಮಕ್ಕಳು ಮರಿ
ಇವಿಷ್ಟೆ ಪ್ರಪಂಚ ಇದರಾಚೆಗೆ
ಬಡಿಗೇರ ಅನುಸೂಯಕ್ಕ
ಶಂಕ್ರಣ್ಣ ಹುಚ್ಚಲ್ಲದ ಹುಚ್ಚಿ ಕಾಳವ್ವ
ಸಣ್ಣಕಲ್ಲು ಮುಳ್ಳು
ಹಾದಿಗೆ ತೆಗೆದಿರಿಸಿ ಸೆಗಣಿಹಿಡಿತಿದ್ದ
ಕಾಯಕದ ಪರಮೇಶಜ್ಜ
ಕಟ್ಟಿದ ಹಸು ಎಮ್ಮೆ ಗಳೆ ಸ್ನೇಹಿ

ಕಾಯಕಯೋಗಿಯೇ ತಾನೆನಿಸಿ ಬದುಕಿನನೇಕ
ಪಾತ್ರ ನಿಭಾಯಿಸಿದ್ದ

ಬಿಸಿಲು ಮಳೆಗೆ ಅಳುಕಲಿಲ್ಲ
ಬಡ ಬದುಕಿಗಂತೂ
ಕಿಂಚಿತ್ತೂ ಜಗ್ಗಲಿಲ್ಲ
ಸುತ್ತಿ ಮಲೆ ಸೀಮೆ ದುಡಿದ ಜೀವ
ಉಡುಪಿ ಆಸುಪಾಸೆಲ್ಲ
ಮದುವೆಗೂ ಮುಂಚೆ
ಸಂಸಾರ ರಕ್ಷಣೆ ಹೊಣೆ ನಿಬಾಯಿಸಿ
ಮೂಗಬಸವನ ನಂಬಿ
ಮನೆ ಮಂದಿಗೆಲ್ಲ ಪ್ರೀತಿ ಹಂಚಿ
ಊರತೇರು ಬರಲು
ಕಾಡ ಖುಷಿ ಹಕ್ಕಿಯಂತಾಗಿ
ಉದ್ದದ ಬಾಕಿ ಚೀಟಿ ದಿನಸಿ
ಸಾಮಾನ ಹೊತ್ತು ಪರಿ
ದ್ಯಾಮಪ್ಳ ಮನೆಯಲಿ
ಮಾಡಿಸಿದ ಹೋಳಿಗೆಯ ಹೊದಿಸಿ
ಬಸವಣ್ಣನ ಗುಡಿಗೆ
ಆಚರಿಸಿ ದ ಹಬ್ಬ ಇನ್ನ  ಕನಸಷ್ಟೇ
       ಕೂಡು ಮನೆಗೆ ನೀಡೆ ತಾನಾಗಿ ಸಂಸ್ಕಾರ
ನೆಡೆದಿತ್ತ ವಿಭೂತಿ ಹೆಜ್ಜೆಹಾಕಿ

ಡೈರಿಗ ಹಾಲ ಮಾರಿ
ಉಣಲೊತ್ತು ಸಾಕಿ ಸಲಹಿ
ಕಚ್ಚೆಒಳ ಕಟ್ಟಿದ ರೊಕ್ಕ ಗಂಟು ಬಿಚ್ಚಿ
ಜೀವತೇದ ಓದಿಸಿದ ಪರಿ
ನೋವುಣ್ಣುತಿದೆ ನೆನಪು
ಕಣ್ಣೀರು ಬರಿಸಿ
ಇನ್ನೂ ಸಾಕುವ ಭಾಗ್ಯ
ಸಿಗದೆ ಹೋಯಿತೆನಿಸಿ
ಅದ್ಯಾದೊ ಚಿಕನಗುನ್ಯ ಕಾಲ ಹಿಡಿದು
ಮೂಲೆ ಬಿದ್ದ ನೆಲಕಚ್ಚಿದ
ಕಾಲದ ಯಮ
ಸರಗುಣಿಕೆ ಹಗ್ಗ ದೊಟ್ಟಿಗೆ
ಕೋಗಿಲೆಯಂತೆ
ಜೀವವದು ಹಾರಿ
      ಮೂಗಬಸವೇಶನ ನೆನೆನೆದು ಆತ್ಮ
ಲೋಕ ತೆರಳಿತೋ

ಹೀಡೇರದ ಕನಸಾಗಿ
ಉಳಿದ ಬದುಕಿಗೆ ಸಂಸಾರಕೆ
ನೆಮ್ಮದಿ ಗೆ ಪ್ರೀತಿಗೆ
ಸ್ವಾಭಿಮಾನ ಕೆ
ದೈವ ಭಕ್ತಿ ಗೆ ಕಾಯಕಕೆ ಗೌರವಕೆ
ಒಂದು ಜೀವನ ಪಾಠವಾಗಿ ಉಳಿದ
ಸವೆಸಿ ತುಂಬು ಬದುಕ
ಎದೆಗೆ ಬಿತ್ತಿದ
ದುಡಿಮೆಯಲೆ  ಕೈಲಾಸವೆಂದು
ಬರಿದನಗಾಹಿ ತಾನಲ್ಲ
ಕಾದದ್ದು ಮಕ್ಕಳು ಮರಿಯೆಂಬ
ನಿಜದನಗಳೆ ನಾವೆಂದು
ಅರಿವಾಗುವ ಹೊತ್ತಿಗೆ
ಸತ್ತು ವರುಷ ಹನ್ನೆರಡಾತು
       ಕರುಣಾಳು ಮೂಗಬಸವೇಶ ಆತ್ಮಕ ಚಿರಶಾಂತಿ ಕರುಣಿಸ

✍ಸಂತೋಷ್ ನಾಗರತ್ನಮ್ಮಾರ


No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...